ಕಾಡು ಕೋಳಿ

ಕೆರಾಡ್ರಿಫಾರ್ಮಿóಸ್ ಗಣದ ಸ್ಕೊಲೊಪೇಸಿಡೀ ಕುಟುಂಬದ ಸ್ಕೊಲೋಪಾಕ್ ಜಾತಿಗೆ ಸೇರಿದ ಪಕ್ಷಿ (ವುಡ್ ಕಾಕ್). ಪ್ರಪಂಚದಾದ್ಯಂತ ಹರಡಿದ್ದರೂ ಉತ್ತರ ಯೂರೋಪ್, ಏಷ್ಯ, ಜಪಾನ್ ದೇಶಗಳಲ್ಲಿ ಅಧಿಕವಾಗಿವೆ. ಭಾರತದ ಹಿಮಾಲಯ ತಪ್ಪಲಿನಲ್ಲಿ ಹೆಚ್ಚುಸಂಖ್ಯೆಯಲ್ಲಿ ಕಾಡುಕೋಳಿಗಳನ್ನು ಕಾಣಬಹುದು. ಬಣ್ಣ ಸಾಧಾರಣವಾಗಿ ಮಬ್ಬು ಬಿಳಿ ಅಥವಾ ಕಪ್ಪು ಮಿಶ್ರಿತ ಬಿಳುಪು. ಕಂದುಬಣ್ಣದ ಗರಿಗಳು, ಕೊಕ್ಕು ಮೋಟು, ತಲೆಯ ಮೇಲೆ ಬೂದು ಅಡ್ಡಪಟ್ಟಿಗಳಿವೆ. ತೂಕ ಸುಮಾರು 350 ಗ್ರಾಂಗಳಷ್ಟು. ಈ ಕುಟುಂಬದಲ್ಲಿ ಸುಮಾರು 77 ಪ್ರಭೇದಗಳಿವೆ. ವಾಸ ಹೆಚ್ಚಾಗಿ ನೀರಿನ ಬಳಿ ಮತ್ತು ಜೌಗು ಪ್ರದೇಶಗಳಲ್ಲಿ. ಕೀಟ ಮತ್ತು ಹುಳುಗಳು ಇವುಗಳ ಆಹಾರ. ಕಾಡುಕೋಳಿಗಳು ಹೊಟ್ಟೆಬಾಕ ಪ್ರಾಣಿಗಳು. ಸದಾ ತಿನ್ನುತ್ತಲೇ ಇರಬೇಕು. ಋತುಮಾಸದಲ್ಲಿ ವಿನಾ ಉಳಿದ ಕಾಲಗಳಲ್ಲಿ ಗುಂಪಾಗಿ ವಾಸಿಸುತ್ತವೆ. ಋತುಕಾಲದಲ್ಲಿ ಗಂಡು ಹೆಣ್ಣನ್ನು ಓಲೈಸಲು ನಾನಾ ನಾಟ್ಯಭಂಗಿಗಳನ್ನು ತಳೆಯುತ್ತದೆ: ಸುಸ್ವರಗಳನ್ನು ಹೊರಡಿಸುತ್ತದೆ. ಅನೇಕ ವೇಳೆ ಗಂಡು ಗಂಡುಗಳಲ್ಲಿ ಜಗಳವಾಗುವುದೂ ಉಂಟು. ಹೆಣ್ಣು ಒಂದು ಸಲಕ್ಕೆ 3-4 ಮೊಟ್ಟೆಗಳನ್ನು ಇಡುತ್ತದೆ. ಗೂಡು ಕಟ್ಟುವುದುಂಟು, ಖಾಲಿ ಪೊಟರೆಗಳನ್ನು ಆಶ್ರಯಿಸುವುದೂ ಉಂಟು. ತಾಯಿ ಹಕ್ಕಿ ಮರಿಗಳ ಪೋಷಣೆ ಮಾಡುತ್ತದೆ.

(ಎನ್.ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ